ಕಿಪ್ಪರ್ ಮೀನು

 ಸಾಲ್ಮನ್ ಜಾತಿಯ ಗಂಡುಮೀನಿಗೆ ಅದರ ವಂಶಾಭಿವೃದ್ಧಿಯ ಕಾಲದಲ್ಲಿನ ಸಾಮಾನ್ಯ ಹೆಸರು. ಆ ಅವಧಿಯಲ್ಲಿ ಮೀನಿನ ಕೆಳದವಡೆ ಉಬ್ಬಿಕೊಂಡು ಕೊಕ್ಕಿನಂತೆ ಕಾಣುವುದೇ ಈ ಹೆಸರಿಗೆ ಕಾರಣ. ಕೊಕ್ಕಿಗೆ 'ಕಿಪ್' ಎಂಬ ಹೆಸರು ಉಂಟು. ಬಹಳ ಕಾಲ ಕೆಡದಂತೆ ಇಡಲು ಹೊಗೆಯಾಡಿಸಿ ಹದಮಾಡಿದ ಮೀನಿಗೂ ಕಿಪ್ಪರ್ ಮೀನೆಂಬ ಹೆಸರೇ ಇದೆ. ಮೀನನ್ನು ಸೀಳಿ, ಶುಚಿಮಾಡಿ, ಉಪ್ಪು ಸೇರಿಸಿ, ಹೊಗೆಯಾಡಿಸಿ ಹದಮಾಡುವ ಕ್ರಮಕ್ಕೆ ಕಿಪರಿಂಗ್ ಎಂದು ಹೆಸರು. ಸ್ಯಾಮನ್ ಮೀನಲ್ಲದೆ ಹೆರಿಂಗ್ ಮೀನನ್ನೂ ಈ ರೀತಿ ಸಂಸ್ಕರಿಸಿ ಕೆಡದಂತೆ ಮಾಡಿ ಶೇಖರಿಸುತ್ತಾರೆ. ಮೊದ ಮೊದಲು ಸ್ಯಾಮನ್ ಮತ್ತು ಹೆರಿಂಗ್ ಮೀನುಗಳಿಗೆ ಮಾತ್ರ ಈ ಪದ ಬಳಸಲಾಗುತ್ತಿತ್ತು. ಕಾಲಕ್ರಮದಲ್ಲಿ ಇದರ ಬಳಕೆ ವಿಸ್ತಾರಗೊಂಡು ಹೊಗೆಗೂಡಿಸಿ ಹದಮಾಡಿದ ಯಾವ ಮೀನಿಗಾದರೂ ಬಳಸಬಹುದಾಗಿದೆ. 

 ಕಿಪ್ಪರ್ ಮಾಡಿದ ಸಾಲ್ಮನ್ ಮೀನು 1479 ರಿಂದಲೂ ಹೆರಿಂಗ್ ಮೀನು 1843 ರಿಂದಲೂ ಬ್ರಿಟನ್‍ನಲ್ಲಿ ಬಳಕೆಯಲ್ಲಿವೆ.

 (ಸಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ